*ಎಲ್ಲಿ ಹೋದಿರಿ ನನ್ನ ತೊರೆದು ಹೀಗೆ*
ಸಾಹಿತ್ಯ: ಎಚ್ಚೆಸ್ ವೆಂಕಟೇಶಮೂರ್ತಿ
ಧ್ವನಿ: ಎಸ್ ಪಿ ಬಾಲಸುಬ್ರಹ್ಮಣ್ಯಂ
ಎಲ್ಲಿ ಹೋದಿರಿ ನನ್ನ ತೊರೆದು ಹೀಗೆ
ಮರಳ ಹಾಸನು ತೊರೆದ ನದಿಯ ಹಾಗೆ
ಕಣ್ಣ ಕುಡಿ ಮಿಂಚುಗಳೆ
ಎಳೆ ನಗೆಯ ಹೊಂಚುಗಳೆ
ಕುಣಿವ ಮೂಗಿನ ತುದಿಯ ಹರಳ ಸಂಚೆ
ಬಾಗಿಲೊರೆಗೂ ಬಂದು
ಮರೆ ನಿಂತ ಮಾತುಗಳೆ
ಗಾಳಿಯಲಿ ಢವಗುಡುವ ಸೆರಗಿನಂಚೆ
ಉಪ್ಪು ಕಡಲಿನ ಮೇಲೆ
ತೇಲಿದೆದೆ ದ್ವೀಪವಿದು
ಕತ್ತಲಲಿ ನಿಶ್ಶಬ್ದ ಮಿನುಗಿದೊಲವೆ
ನನ್ನ ಪ್ರೀತಿಯ ಹಾಡಿನ
ಒಳಗಾಡೊ ಬಿಸಿಯುಸಿರೆ
ಹಾಡ ತೊರೆದು ಓಡಿದ ಆಲಾಪವೆ
ಬಿಸಿಲಲ್ಲಿ ನೆರಳಲ್ಲಿ ಜತೆಗಿದ್ದ ಆಸರೆಯೆ
ಹುಚ್ಚು ಹೊಳೆ ದಾಟಿಸಿದ ತೋಳ ಬಲವೆ
ಬಿರುಬಿಸಿಲಬೇಸಗೆಯ ಕಾಲ್ಸುಡುವ ಬಯಲಲ್ಲಿ
ಹನಿಮುತ್ತಾ ಚಿಲುಮೆ ಕೊಡೆ ಹಿಡಿದ ಒಲವೆ
🌿🌼🌿🌼🌿🌼🌿🌼🌿
ಅನುಸಂಧಾನ: ಕೃಷ್ಣ ಭಟ್ ಅಳದಂಗಡಿ
Comments
Post a Comment